ನಳ 1 -

ನಿಷಧ ದೇಶದ ದೊರೆ. ವೀರಸೇನನ ಮಗ. ಸ್ಫುರದ್ರೂಪಿ. ಹಂಸದೌತ್ಯದಿಂದ ಅಷ್ಟೇ ರೂಪಖ್ಯಾತಿಯನ್ನು ಪಡೆದಿದ್ದ ವಿದರ್ಭದೇಶದ ರಾಜಪುತ್ರಿ ದಮಯಂತಿಯನ್ನು ವರಿಸಿದ. ಕೆಲಕಾಲ ನಳದಮಯಂತಿಯರು ಸುಖವಾಗಿರುತ್ತಾರೆ. ನಳನ ಧರ್ಮಪರಾಯಣತೆಯನ್ನು ಪರೀಕ್ಷಿಸುವ ಪಣ ತೊಟ್ಟ ಕಲಿ, ಒಮ್ಮೆ ಬೇಟೆಯಿಂದ ಬಂದು ಕಾಲು ತೊಳೆಯದೆ ಮನೆಯನ್ನು ಹೊಕ್ಕ ನಳನಲ್ಲಿ ಪ್ರವೇಶ ಮಾಡಿ ಅವನನ್ನು ಕಾಡತೊಡಗುತ್ತಾನೆ. ಪುಷ್ಕರನೊಂದಿಗೆ ಪಗಡೆಯಾಡಿ ಸೋತ ನಳ ಕಾಡುಪಾಲಾಗುತ್ತಾನೆ. ಮಕ್ಕಳಾದ ಇಂದ್ರಸೇನ ಇಂದ್ರಸೇನೆಯರನ್ನು ತಂದೆಯ ಬಳಿ ಬಿಟ್ಟು ಗಂಡನನ್ನು ಅನುಸರಿಸಿ ದಮಯಂತಿಯೂ ಕಾಡುಪಾಲಾಗುತ್ತಾಳೆ. ಮುಂದೆ ನಳ ದಮಯಂತಿಯನ್ನು ವಂಚಿಸಿ ಕಣ್ಮರೆಯಾಗುವುದು, ಕಾರ್ಕೋಟಕನ ದಂಶನಕ್ಕೆ ಸಿಕ್ಕು ಕುರೂಪಿಯಾಗುವುದು, ದಮಯಂತಿ ತಂದೆಯ ಮನೆ ಸೇರಿ ಪರಿತಪಿಸುವುದು, ದಮಯಂತಿ ಎರಡನೆಯ ಸ್ವಯಂವರವನ್ನು ಏರ್ಪಡಿಸುವುದು, ಕಲಿ ಸುಪ್ರೀತನಾಗಿ ನಳನಿಗೆ ರೂಪಶ್ರೀಯನ್ನೂ ರಾಜ್ಯಶ್ರೀಯನ್ನೂ ಕೊಡುವುದು-ಹೀಗೆ ನಳನ ಕಥೆ ಮುಂದುವರಿಯುತ್ತದೆ. ವಿವರಗಳಿಗೆ (ನೋಡಿ- ದಮಯಂತಿ).

ಭಾರತೀಯ ಸಾಂಸ್ಕøತಿಕ ಇತಿಹಾಸದಲ್ಲಿ ನಳನ ಕತೆ ಅತ್ಯಂತ ಪ್ರಾಚೀನವಾದುದು. ಮಹಾಭಾರತ ಪೂರ್ವದಲ್ಲಿಯೇ ಇದು ತನ್ನ ಸರಳ ಸುಂದರ ನಿರೂಪಣಾ ವಿಧಾನದಿಂದಾಗಿ ಜನಪ್ರಿಯವಾಗಿತ್ತು. ಮಹಾಭಾರತದಲ್ಲಿ ಮಾತ್ರವಲ್ಲದೆ, ಗುಣಾಢ್ಯನ ಬೃಹತ್ಕಥೆಯಲ್ಲಿಯೂ ಸ್ಥಾನಪಡೆದಿರುವ ಈ ಕತೆ ಮಹಾಭಾರತದ ಬೆಳವಣಿಗೆಯಲ್ಲಿ ಮಹತ್ತ್ವದ ಪಾತ್ರವನ್ನು ವಹಿಸಿರುವುದಾಗಿ ವಿದ್ವಾಂಸರು ತರ್ಕಿಸಿದ್ದಾರೆ. ಚೌಂಡರಸನ ಕನ್ನಡ ನಳಚಂಪುವಿನಲ್ಲಿಯೂ ಕನಕದಾಸನ ನಳಚರಿತ್ರೆಯಲ್ಲಿಯೂ ಈ ಕತೆ ರಮ್ಯವಾಗಿ ಮೈದಳೆದಿದೆ. ನಳಚರಿತ್ರೆ ಕನ್ನಡದ ಮನೋಜ್ಞ ಹಾಗೂ ಜನಪ್ರಿಯ ಕೃತಿಗಳಲ್ಲಿ ಒಂದು. ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ಜಗತ್ತಿನ ಅನೇಕ ಭಾಷೆಗಳಲ್ಲೂ ಇದು ಅನುವಾದಗೊಂಡು ಲೋಕಮನ್ನಣೆಯನ್ನು ಸಂಪಾದಿಸುತ್ತಿದೆ ಎಂಬುದು ಈ ಕತೆಯಲ್ಲಿರುವ ಚೊಕ್ಕತನದ ಹೃದಯುಗಮತೆಗೆ ಸಾಕ್ಷಿಯಾಗಿದೆ. 					
			(ಎಸ್.ಬಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ